ಸಂಕೇತ ಮತ್ತು ತಿರುಳು

ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಧಾರ್ಮಿಕ ಆಚರಣೆಗಳು ಔಚಿತ್ಯವಾದುದಲ್ಲ

May 30, 2023 09:57 am | Updated 09:57 am IST

ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಹೊಸ ಕಟ್ಟಡ ಉದ್ಘಾಟನೆ ಮಾಡಿದ್ದು ಅವರು ಇತ್ತೀಚೆಗೆ ಕರಗತ ಮಾಡಿಕೊಂಡ ಶೈಲಿಯಲ್ಲೇ ಇತ್ತು. ಅವರ ವಿಮರ್ಶಕರು ಸಮಸ್ಯಾತ್ಮಕವಾಗಿ ಕಾಣುವ ರಾಜಕೀಯವನ್ನು ಸ್ಥಾಪಿಸಲು ಮೋದಿಯವರು ಪ್ರತಿ ಸಂದರ್ಭವನ್ನು ಬಳಸುತ್ತಾರೆ. ಮೋದಿ ಅವರು ಹೊಸ ಕಟ್ಟಡದ ಸೌಂದರ್ಯವನ್ನು ಭಾರತದ ವೈವಿಧ್ಯತೆ, ಅದರ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಅದರ ಎತ್ತರದ ಆಕಾಂಕ್ಷೆಗಳ ಪ್ರತಿನಿಧಿಯಾಗಿ ಪ್ರಸ್ತುತಪಡಿಸಿದರು. ಬಹು-ಧರ್ಮೀಯ ಪ್ರಾರ್ಥನೆಯು ಸಮಾರಂಭದ ಒಂದು ಭಾಗವಾಗಿದ್ದರೂ ಹಿಂದೂ ಧಾರ್ಮಿಕತೆಯು ಎಲ್ಲವನ್ನು ಮರೆಮಾಡಿತ್ತು ಎಂಬುದರಲ್ಲಿ ಸಂಶಯವಿಲ್ಲ. ತಮಿಳುನಾಡಿನ ಶೈವ ಪಂಥವೊಂದು ಭಾರತದ ಮೊದಲ ಪ್ರಧಾನ ಮಂತ್ರಿಗೆ ಉಡುಗೊರೆಯಾಗಿ ನೀಡಿದ ರಾಜದಂಡವಾದ ಸೆಂಗೋಲ್ ಸುತ್ತಲೂ ಕಥೆಯೊಂದನ್ನು ಹೆಣೆದು ಪ್ರಸ್ತುತ ಆಡಳಿತವು ಭಾರತದ ಗಣರಾಜ್ಯ ಮತ್ತು ಸಾರ್ವಭೌಮತ್ವದ ಮೂಲ ತತ್ವಗಳನ್ನು ಮರುರೂಪಿಸಲು ಪ್ರಯತ್ನಿಸಿದೆ. ಸೆಂಗೋಲ್ ದೈವಿಕ ಹಕ್ಕನ್ನು ಸಂಕೇತಿಸುತ್ತದೆ ಮತ್ತು ಈಗ ಅದನ್ನು ಜನಪ್ರತಿನಿಧಿಗಳ ಸಭೆಯಲ್ಲಿ ಸ್ಥಾಪಿಸಲಾಗಿದೆ. ಈ ಸಾಂಕೇತಿಕತೆಯು ಭಾರತದ ರಾಜಕೀಯ ಕೇಂದ್ರದೊಂದಿಗೆ ತಮಿಳುನಾಡಿನ ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ಭಾರತೀಯ ಜನತಾ ಪಕ್ಷವು (ಬಿಜೆಪಿ) ಅದರಿಂದ ರಾಜಕೀಯ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದೆ. ನೂತನ ಸಂಸತ್ ಭವನವನ್ನು ಹಿಂದುತ್ವದ ಸ್ಥಾಪಕ ವಿ. ಡಿ. ಸಾವರ್ಕರ್ ಅವರ ಜನ್ಮದಿನದಂದೇ ನೆರವೇರಿಸಿರುವುದು ಗಮನಾರ್ಹ. ಭಾರತ ಗಣರಾಜ್ಯವನ್ನು ಹೊಸ ತಿರುವಿಗೆ ಹೊರಳಿಸುವ ಪ್ರಯತ್ನ ಈ ಸಮಾರಂಭದ ಶೈಲಿ ಮತ್ತು ತಿರುಳಿನಲ್ಲಿ ಸ್ಪಷ್ಟವಾಗಿತ್ತು.

ಹೊಸ ಕಟ್ಟಡವು ಮುಂದಿನ ದಶಕದಲ್ಲಿ ಭಾರತ ಎದುರಿಸಲಿರುವ ಪ್ರಾತಿನಿಧ್ಯದ ಸವಾಲಿನತ್ತ ನಮ್ಮ ಗಮನ ಸೆಳೆಯುತ್ತದೆ. ಕ್ಷೇತ್ರ ಮರುವಿಂಗಡಣೆ ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯವನ್ನು ಮರುಹಂಚಿಕೆ ಮಾಡುತ್ತದೆ. ಇದು ಸಂಸತ್ತಿನಲ್ಲಿ ದಕ್ಷಿಣದ ರಾಜ್ಯಗಳ ಭಾಷಾ ಅಲ್ಪಸಂಖ್ಯಾತರ ಧ್ವನಿಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ತಮ್ಮ ಜನಸಂಖ್ಯೆಯನ್ನು ಸ್ಥಿರಗೊಳಿಸಿದ ರಾಜ್ಯಗಳ ಪ್ರಾತಿನಿಧ್ಯ ಸಂಪೂರ್ಣವಾಗಿ ಕಡಿತಗೊಳ್ಳುವುದನ್ನು ತಪ್ಪಿಸಲು ಲೋಕಸಭೆ ಮತ್ತು ರಾಜ್ಯಸಭೆಯ ಗಾತ್ರವನ್ನು ವಿಸ್ತರಿಸುವ ಸಾಧ್ಯತೆಯಿದೆ. ಆದರೆ ಭಾರತೀಯ ರಾಜಕೀಯದ ಭೌಗೋಳಿಕ ವಿಘಟನೆಯಿಂದಾಗಿ ಈಗಾಗಲೇ ಅನೇಕ ಪ್ರದೇಶಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿರುವ ತಮ್ಮ ದನಿಗೆ ಬೆಲೆಯಿಲ್ಲ ಎಂಬ ಭಾವವನ್ನು ಶಮನಗೊಳಿಸಲು ಇದು ಸಾಕಾಗುವುದಿಲ್ಲ. ಬಿಜೆಪಿ ತನ್ನ ಸಂಸದೀಯ ಬಹುಮತವನ್ನು ತನ್ನ ಭದ್ರಕೋಟೆಯೆನಿಸಿದ ಕೆಲವೇ ರಾಜ್ಯಗಳಿಂದ ಗೆಲ್ಲುತ್ತದೆ. ಅನೇಕ ರಾಜ್ಯಗಳು ಬಿಜೆಪಿಯ ಪ್ರಭಾವದಿಂದ ಮುಕ್ತವಾಗಿವೆ. ಶೇ. ೩೮ರಷ್ಟು ಜನಪ್ರಿಯ ಮತಗಳನ್ನು ಪಡೆದು ಬಿಜೆಪಿಯು ಪ್ರಸ್ತುತ ಶೇ. ೫೫ರಷ್ಟು ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಕ್ಷೇತ್ರ ಮರುವಿಂಗಡಣೆಯ ನಂತರ ಈ ಅಸಮತೋಲನ ಉಲ್ಬಣಗೊಳ್ಳಲಿದೆ. ಪ್ರಸ್ತುತ ತನ್ನ ಭದ್ರಕೋಟೆಗಳಾಚೆಗಿನ ಪ್ರದೇಶಗಳು ಮತ್ತು ಸಮುದಾಯಗಳನ್ನು ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿರುವುದನ್ನು ಸ್ವಾಗತಿಸಬೇಕು. ಆದರೆ ಭಾರತದ ಪ್ರಾದೇಶಿಕ ಅಸಮತೋಲನವನ್ನು ಪರಿಹರಿಸಲು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಹೆಚ್ಚು ಗಾಂಭೀರ್ಯ, ಸೂಕ್ಷ್ಮತೆ ಮತ್ತು ಪ್ರಬುದ್ಧತೆಯನ್ನು ತೋರಿಸಬೇಕಾಗಿದೆ, ಸಾಂಕೇತಿಕೆಯಷ್ಟೇ ಸಾಲದು.

Top News Today

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.