ಹಳೆಯದು ಮತ್ತು ಹೊಸದು

ಟೈಟನ್ಸ್ ವಿರುದ್ಧ ಸಿಎಸ್‌ಕೆ ಗೆಲುವು ಐಪಿಎಲ್‌ನ ಅತ್ಯುತ್ತಮ ತಂಡವನ್ನು ಮತ್ತು ಹೊಸ ತಂಡಗಳನ್ನು ಪ್ರದರ್ಶಿಸಿತು

May 31, 2023 10:49 am | Updated 10:49 am IST

ಬೇಸಿಗೆಯ ರಾತ್ರಿಯ ಮಳೆಯೊಂದಿಗೆ ಹವಾಮಾನ ಚಂಚಲವಾಗಿದ್ದಿರಬಹುದು. ಆದರೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿಯನ್ನು ಗೆದ್ದದ್ದರಲ್ಲಿ ಅನಿರೀಕ್ಷಿತವೇನೂ ಇರಲಿಲ್ಲ. ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೂರು ದಿನಗಳ ಕಾಲ ನಡೆದ ಫೈನಲ್‌ನಲ್ಲಿ ರವೀಂದ್ರ ಜಡೇಜಾ ಗೆಲುವಿನ ರನ್ನುಗಳನ್ನು ಗಳಿಸುವುದರೊಂದಿಗೆ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಸಿಎಸ್‌ಕೆ ಕೊನೆಯ ಓವರಿನಲ್ಲಿ ಗೆಲುವು ದಾಖಲಿಸಿತು. ಮಳೆಯ ಕಾರಣಕ್ಕೆ ಭಾನುವಾರ ಪಂದ್ಯವೇ ನಡೆಯಲಿಲ್ಲ, ಮತ್ತೆ ಸೋಮವಾರ ಮಳೆಯ ಕಾರಣವಾಗಿ ಪಂದ್ಯ ಅರ್ಧಕ್ಕೆ ನಿಂತಿತು. ಕಡೆಗೆ ಮಂಗಳವಾರ ಮುಂಜಾನೆ ಪಂದ್ಯ ಮುಗಿಯಿತು. ಎಲ್ಲರ ಗಮನ ಸೆಳೆದಿದ್ದು ಸಿಎಸ್‌ಕೆ ತಂಡದ ಶಾಂತಚಿತ್ತತೆ. ಬಹುಶಃ ತಂಡವು ಅದರ ಶಾಶ್ವತ ನಾಯಕ ಮಹೇಂದ್ರ ಸಿಂಗ್ ಧೋನಿಯಿಂದ ಅದನ್ನು ಅಳವಡಿಸಿಕೊಂಡಿರಬೇಕು. ಧೋನಿ ತನ್ನಲ್ಲಿ ಕನಿಷ್ಠ ಇನ್ನೊಂದು ವರ್ಷ ಐಪಿಎಲ್ ಆಡುವ ಸಾಮರ್ಥ್ಯ ಇದೆ ಎಂಬ ಸುಳಿವು ನೀಡಿದರು. ಐಪಿಎಲ್ಲಿನ ಇತಿಹಾಸದಲ್ಲಿ ಅತ್ಯಂತ ಸ್ಥಿರವಾದ ತಂಡ ಸಿಎಸ್‌ಕೆ, ಕಿರಿಯ ತಂಡಗಳಲ್ಲಿ ಅತ್ಯಂತ ಭರವಸೆಯ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಟಿ-೨೦ ಕ್ರಿಕೆಟ್ಟಿನ ಎಲ್ಲ ರೋಚಕತೆಯೂ ಇತ್ತು. ಧೋನಿಯ ಮಿಂಚಿನ ವೇಗದ ಆಟದಿಂದ ಟೈಟನ್ಸ್ ತಂಡದ ಶುಭಮನ್ ಗಿಲ್ ೩೯ ರನ್ನುಗಳಿಗೆ ಔಟಾದರು. ಆದರೆ ಸ್ವತಃ ಚೆನ್ನೈ ಮೂಲದ ಆಟಗಾರ ಸಾಯಿ ಸುದರ್ಶನ್ ೯೬ ರನ್ ಗಳಿಸುವುದರೊಂದಿಗೆ ಟೈಟನ್ಸ್ ತಂಡವು ೪ ವಿಕೆಟ್‌ಗೆ ೨೧೪ ರನ್ ಹೊಡೆಯಿತು. ಮಳೆ ವಿರಾಮದ ನಂತರ ಗುರಿಯನ್ನು ೧೭೧ಕ್ಕೆ ಪರಿಷ್ಕರಿಸಲಾಯಿತು. ಧೋನಿ ಶೂನ್ಯಕ್ಕೆ ಔಟಾದರೂ ಸಹ ರವೀಂದ್ರ ಜಡೇಜಾ ಸುಧೀರ್ಘ ಅತ್ಯುತ್ತಮ ಆಟ ಸಿಎಸ್‌ಕೆ ಗೆಲುವಿಗೆ ಕಾರಣವಾಯಿತು.

ಈ ಪಂದ್ಯದೊಂದಿಗೆ ೧೦ ತಂಡಗಳೊಂದಿಗೆ ನಡೆದ ಸುದೀರ್ಘ ಐಪಿಎಲ್ ಪಂದ್ಯಾವಳಿಯೂ ಮುಕ್ತಾಯವಾಯಿತು. ಹಳೆಯ ತಂಡಗಳ ಪೈಕಿ ಅತ್ಯುತ್ತಮ ತಂಡಗಳಾದ ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್ ಮತ್ತು ಕಳೆದ ವರ್ಷದಿಂದ ಐಪಿಎಲ್ಲಿಗೆ ಸೇರ್ಪಡೆಯಾದ ತಂಡಗಳಾದ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜಯಂಟ್ಸ್ ಸೆಮಿಫೈನಲ್ಸ್ ಹಣಾಹಣಿಗೆ ಬಂದದ್ದು ಅವರ ಸಹಜ ಶಕ್ತಿಯ ಪ್ರತಿಬಿಂಬವಾಗಿದೆ. ಸಿಎಸ್‌ಕೆ ತಂಡ ಮೊದಲಿನಿಂದಲೂ ನೆಚ್ಚಿನ ತಂಡವಾಗಿತ್ತು. ಮುಂಬೈ ಇಂಡಿಯನ್ಸ್ ನಿಧಾನಗತಿಯ ಅಭಿಯಾನವನ್ನು ಪ್ರಾರಂಭಿಸಿತಾದರೂ ಮಧ್ಯೆ ಚೇತರಿಸಿಕೊಂಡಿತು. ಉಳಿದವುಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ಎಡವಿತು. ವಿರಾಟ್ ಕೊಹ್ಲಿ ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಗಾಗಿ ಹಾತೊರೆಯುತ್ತಿದ್ದಾರೆ. ಗಿಲ್ (೮೯೦ ರನ್) ವೈಟ್ ಬಾಲ್ ಕ್ರಿಕೆಟ್ಟಿನಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿ ಎಂದು ಸಾಬೀತುಪಡಿಸಿದರೆ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ ಮತ್ತು ಮೋಹಿತ್ ಶರ್ಮಾ ಅವರಂತಹ ಅನುಭವಿಗಳು ಟಿ-೨೦ ಸ್ವರೂಪದಲ್ಲಿ ಪ್ರವೀಣರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಟೈಟನ್ಸ್ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದು, ಕೊಂಚ ಅದೃಷ್ಟ ಇದ್ದಿದ್ದರೆ ಪ್ರಶಸ್ತಿಯನ್ನು ಉಳಿಸಿಕೊಳ್ಳಬಹುದಿತ್ತು ಕೂಡಾ. ಸಿಂಹಳೀಯ ವೇಗಿ ಮಥೀಶ ಪಥಿರಾನ್ ಸಿಎಸ್‌ಕೆಯ ಬೆಂಬಲಿಗರ ಪೈಕಿ ಪಡೆದ ಅಭೂತಪೂರ್ವ ಮನ್ನಣೆ, ಪ್ರೀತಿ ಹಳೆಯ ಬಿರುಕುಗಳನ್ನು ಮುಚ್ಚುವ ಕ್ರೀಡೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಅದೇ ಸಮಯದಲ್ಲಿ ಪಾಕಿಸ್ತಾನಿ ಕ್ರಿಕೆಟಿಗರ ಅನುಪಸ್ಥಿತಿಯು ಕ್ರೀಡೆಯ ಮೇಲೆ ರಾಜಕೀಯದ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ. ಸದ್ಯ ಐಪಿಎಲ್‌ ಮುಗಿದಿರಬಹುದು. ಆದರೆ ಜೂನ್ ೭ ರಿಂದ ಲಂಡನ್ನಿನ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಯಾರಿ ನಡೆಸುತ್ತಿರುವ ಭಾರತೀಯ ಆಟಗಾರರಿಗೆ ಬಿಡುವು ಇಲ್ಲ.

Top News Today

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.