ಎಲ್ಲರಿಗೂ ವಿಮೆ

ವಿಮಾ ಮಟ್ಟವನ್ನು ವಿಸ್ತರಿಸುವ ಐ.ಆರ್.ಡಿ.ಎ. ಐ. ಯೋಜನೆಗೆ ಸರ್ಕಾರದ ಬೆಂಬಲದ ಅಗತ್ಯವಿದೆ

May 31, 2023 10:51 am | Updated 10:51 am IST

ಕಳೆದ ವಾರ ಭಾರತದ ವಿಮಾ ವಲಯದ ನಿಯಂತ್ರಕ ಮುಖ್ಯಸ್ಥರು ೨೦೪೭ರ ವೇಳೆಗೆ ಪ್ರತಿಯೊಬ್ಬರಿಗೂ ವಿಮೆ ಮಾಡಿಸುವ ಗುರಿಯೊಂದಿಗೆ ಜನಸಂಖ್ಯೆಯ ಹೆಚ್ಚಿನ ಭಾಗವನ್ನು ಹಲವು ರೀತಿಯ ಆಘಾತಗಳ ವಿರುದ್ಧ ವಿಮೆ ಮೂಲಕ ರಕ್ಷಿಸಲು ಹೊಸ ನೀಲನಕ್ಷೆಯನ್ನು ಅನಾವರಣಗೊಳಿಸಿದರು. ಭಾರತದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ದೇಶದ “ದೊಡ್ಡ ವಿಮಾ ಅಂತರವನ್ನು” ನಿವಾರಿಸಲು ಸರಳವಾದ ಆಲ್-ಇನ್- ಒನ್ ವಿಮಾ ನೀತಿಯನ್ನು ಕಲ್ಪಿಸಲಾಗುತ್ತಿದೆ. ಜೀವ ವಿಮೆ ಮತ್ತು ಸಾಮಾನ್ಯ ವಿಮಾದಾರರಿಗೆ ರೂಪಿಸಲಾದ ಈ ‘ಬಿಮಾ ವಿಸ್ತಾರ್’ ಯೋಜನೆಯು ವೈದ್ಯಕೀಯ ತುರ್ತು ಪರಿಸ್ಥಿತಿಗಳು, ಅಪಘಾತಗಳು, ಕಳ್ಳತನಗಳು ಅಥವಾ ಕುಟುಂಬದಲ್ಲಿ ಸಾವಿನ ಸಂದರ್ಭದಲ್ಲಿ ತ್ವರಿತ ಹಣಕಾಸಿನ ಬೆಂಬಲವನ್ನು ಕುಟುಂಬಗಳಿಗೆ ಒದಗಿಸುತ್ತದೆ. ವಿಮೆಯ ಪ್ರಯೋಜನಗಳ ಬಗ್ಗೆ ಇನ್ನೂ ಅಷ್ಟು ಜಾಗೃತಿ ಇಲ್ಲದಿರುವುದರಿಂದ ಪ್ರತಿ ಮನೆಯ ಮಹಿಳಾ ಮುಖ್ಯಸ್ಥರಿಗೆ ಇಂತಹ ಯೋಜನೆಯು ಸಂಕಷ್ಟದ ಸಮಯದಲ್ಲಿ ಹೇಗೆ ಸಹಾಯಕವಾಗಬಹುದು ಎಂಬುದರ ಕುರಿತು ಜಾಗೃತಿ ಮೂಡಿಸಲು ಗ್ರಾಮ ಸಭೆ-ಮಟ್ಟದ ಅಭಿಯಾನವನ್ನು ಕೈಗೊಳ್ಳುವುದಾಗಿ ಪ್ರಸ್ತಾಪಿಸಲಾಗಿದೆ. ಹೊಸ ‘ಬಿಮಾ ಸುಗಮ’ ವೇದಿಕೆ ಎಲ್ಲ ವಿಮಾ ಕಂಪೆನಿಗಳು ಮತ್ತು ವಿತರಕರನ್ನು ಸಂಯೋಜಿಸುತ್ತದೆ ಮತ್ತು ಗ್ರಾಹಕರಿಗೆ ಒಂದು-ನಿಲುಗಡೆಯ ಅನುಭವವನ್ನು ನೀಡುತ್ತದೆ. ಮುಂದೆ ವಿಮೆಯ ಮನವಿಗಳ ಸೇವೆಯನ್ನು ಸುಗಮಗೊಳಿಸುತ್ತದೆ. ರಾಜ್ಯಗಳ ಸಾವಿನ ಡಿಜಿಟಲ್ ರಿಜಿಸ್ಟ್ರಿಗಳನ್ನು ಈ ವೇದಿಕೆಗೆ ಸಂಯೋಜಿಸುವುದರಿಂದ ಜೀವ ವಿಮಾ ಮನವಿಗಳನ್ನು ಕೆಲವೇ ಘಂಟೆಗಳಲ್ಲಿ ಅಥವಾ ಒಂದು ದಿನದೊಳಗೆ ಇತ್ಯರ್ಥಗೊಳಿಸಬಹುದು ಎಂದು ಪ್ರಾಧಿಕಾರ ನಂಬಿದೆ.  

ಬಂಡವಾಳದ ಅಗತ್ಯತೆಯ ಮಾನದಂಡಗಳನ್ನು ಸರಳಗೊಳಿಸುವ ಮತ್ತು ಹೊಸ ಕಂಪನಿಗಳು ಮಾರುಕಟ್ಟೆ ಪ್ರವೇಶಿಸಿ ಕೆಲವು ವಿಶೇಷ ವಿಭಾಗಗಳ ಅಗತ್ಯತೆಗಳನ್ನು ಪೂರೈಸಲು ಶಾಸಕಾಂಗದ ಬೆಂಬಲ ಅಗತ್ಯ. ಒಂದು ಕಾಲದಲ್ಲಿ ನಶಿಸುತ್ತಿದ್ದ ಸಾರ್ವಜನಿಕ ವಲಯ ಸ್ವಾಮ್ಯದ ವಿಮಾ ಉದ್ಯಮಕ್ಕೆ ಖಾಸಗಿ ಕಂಪನಿಗಳ ಪ್ರವೇಶದ ಎರಡು ದಶಕಗಳ ನಂತರ ಭಾರತದ ವಿಮೆ ಅನುಪಾತ (ಜಿಡಿಪಿಗೆ ವಿಮೆ ಪ್ರೀಮಿಯಂ ಪಾವತಿಗಳ ಅನುಪಾತ) ೨೦೦೧-೦೨ರಲ್ಲಿ ಶೇ. ೨.೭ರಿಂದ ೨೦೨೧-೨೨ರಲ್ಲಿ ಶೇ. ೪.೨ಗೆ ಏರಿದೆ. ವಾಸ್ತವವಾಗಿ ಇದು ಕಳೆದ ದಶಕದ ಕೊನೆ ಅಂದರೆ ೨೦೦೯-೧೦ರಲ್ಲಿ ಶೇ. ೫.೨ರಷ್ಟಿದ್ದು ಮತ್ತೆ ಕೆಳಮುಖವಾಗಿದೆ. ಜೀವ ವಿಮೆಯಲ್ಲದ ಇತರೆ ಪಾಲಿಸಿಗಳಲ್ಲಿ ಈ ಅನುಪಾತವು ಶೇ. ೧ನ್ನು ಇನ್ನೂ ಮೀರಿಲ್ಲ. ಭಾರತದ ಜನಸಂಖ್ಯೆಯ ಗಾತ್ರ ಮತ್ತು ಕಳಪೆ ಆರ್ಥಿಕ ಸಾಕ್ಷರತೆಯ ಮಟ್ಟವನ್ನು ಗಮನಿಸಿದರೆ ಈ ಯಥಾಸ್ಥಿತಿಯಿಂದ ಹೊರಬರುವುದು ಅನಿವಾರ್ಯವಾಗಿದೆ. ರಾಜ್ಯ ಸರ್ಕಾರಗಳನ್ನು ಒಳಗೊಂಡು ರಾಜ್ಯ ಮಟ್ಟದ ಬ್ಯಾಂಕಿಂಗ್ ಸಮಿತಿಗಳಂತೆಯೇ ವಿಮಾ ಸಮಿತಿಗಳನ್ನು ಸ್ಥಾಪಿಸುವುದು ಜಾಗೃತಿ ಅಭಿಯಾನ ಮತ್ತು ವಿಮಾ ಮಟ್ಟವನ್ನು ಹೆಚ್ಚಿಸಲು ಜಿಲ್ಲಾವಾರು ಕಾರ್ಯತಂತ್ರಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಉದ್ಯಮದ ಕಂಪೆನಿಗಳು ಸಹ ನಗರಗಳನ್ನು ಮೀರಿ ನೋಡಬೇಕಿದೆ ಮತ್ತು ‘ಬಿಮಾ ವಿಸ್ತಾರ್’ ಯೋಜನೆಯು ಅವರು ತಮ್ಮ ಆರಾಮ ವಲಯಗಳಿಂದ ಹೊರಬರಲು ಅಗತ್ಯವಿರುವ ವ್ಯಾಪಾರವನ್ನು ಅವರಿಗೆ ಸೃಷ್ಟಿಸಿ ಕೊಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಕೇಂದ್ರವು ಆರೋಗ್ಯ ಮತ್ತು ಜೀವ ವಿಮಾ ಪ್ರೀಮಿಯಂ ಮೇಲೆ ಶೇ. ೧೮ರಷ್ಟು ಜಿಎಸ್‌ಟಿ ತೆರಿಗೆ ವಿಧಿಸುವುದನ್ನು ಮರುಪರಿಶೀಲಿಸಬೇಕಿದೆ. ಒಂದು ಆರೋಗ್ಯ ವಿಪತ್ತು ಕುಟುಂಬವನ್ನು ಬಡತನ ರೇಖೆಗಿಂತ ಕೆಳಕ್ಕೆ ತಳ್ಳುವ ದೇಶದಲ್ಲಿ ಆರೋಗ್ಯ ವಿಮೆ ಖರೀದಿಸಲು ಶಕ್ತರಾದವರು ಹೆಚ್ಚಿನ ತೆರಿಗೆಯನ್ನು ಪಾವತಿಸಲು ಶಕ್ತರಾಗುತ್ತಾರೆ ಎಂಬ ಕಲ್ಪನೆಯು ತಪ್ಪಾಗಿದೆ. ಪ್ರಾಧಿಕಾರದ ನಾಯಕತ್ವದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವುದು ಕೂಡಾ ಅಷ್ಟೆ ನಿರ್ಣಾಯಕವಾಗಿದೆ. ಪ್ರಸ್ತುತ ಅಧ್ಯಕ್ಷರ ಅಧಿಕಾರಾವಧಿಗೆ ಮೊದಲು ಒಂಬತ್ತು ತಿಂಗಳು ಸಂಸ್ಥೆಗೆ ಮುಖ್ಯಸ್ಥರೇ ಇರಲಿಲ್ಲ. ಇಂತಹ ಪರಿಸ್ಥಿತಿ ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.

Top News Today

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.