ಅನಿಶ್ಚಿತ ಮಳೆ

ರೈತರಿಗೆ ಸಕಾಲದಲ್ಲಿ ಮಳೆಯ ನಿಖರ ಮುನ್ಸೂಚನೆ ನೀಡಬೇಕು

June 01, 2023 10:25 am | Updated 10:25 am IST

ಭಾರತದ ಹವಾಮಾನ ಇಲಾಖೆ (ಐಎಂಡಿ) ಈ ವಾರ ತಾನು ಎಪ್ರಿಲ್ಲಿನಲ್ಲಿ ನೀಡಿದ್ದ ಮುಂಗಾರು ಮುನ್ಸೂಚನೆಯನ್ನು ನವೀಕರಿಸಿದೆ. ಐಎಂಡಿ ಅವಲಂಬಿಸುವ ಹವಾಮಾನ ಮುನ್ಸೂಚನಾ ಮಾದರಿಗಳ ಇತ್ತೀಚಿನ ವಿಶ್ಲೇಷಣೆಯು ಎಲ್ ನಿನೊ ಮೂಡುವುದನ್ನು ಖಚಿತವಾಗಿ ಸೂಚಿಸುತ್ತಿದೆ. ಮಧ್ಯ ಪೆಸಿಫಿಕ್‌ನಲ್ಲಿ ತಾಪಮಾನ ಏರಿಕೆಯ ಆವರ್ತಕ ವಿದ್ಯಮಾನವಾದ ಎಲ್ ನಿನೊ ಮೂಡಿದ ಹತ್ತು ವರ್ಷಗಳಲ್ಲಿ ಆರು ವರ್ಷಗಳು ವಾಯುವ್ಯ, ಪಶ್ಚಿಮ ಮತ್ತು ಮಧ್ಯ ಭಾರತದ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ. ಅದರಲ್ಲೂ ವಿಶೇಷವಾಗಿ ಜುಲೈ ಮತ್ತು ಆಗಸ್ಟ್ ನಡುವೆ ಮಳೆ ಕೊರತೆ ಆಗಿದೆ. ಆದರೆ ಎಲ್ ನಿನೊದ ಖಚಿತತೆಯ ಹೊರತಾಗಿಯೂ, ಐಎಂಡಿ ತನ್ನ ‘ಸಾಮಾನ್ಯ ಮುಂಗಾರಿನ’ ಮುನ್ಸೂಚನೆಯನ್ನು ಉಳಿಸಿಕೊಂಡಿದೆ: ೫೦ ವರ್ಷಗಳ ಸರಾಸರಿ ಮಳೆ ೮೭ ಸೆಂಟಿಮೀಟರ್ ಮಳೆಗೆ ಹೋಲಿಸಿದರೆ ಶೇ. ೯೬ರಷ್ಟು ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ಹೇಳಿದೆ. ಶೇ. ೯೬ಕ್ಕಿಂತ ಕಡಿಮೆಯಾಗಿದ್ದರೆ ಆಗ ಸಾಮಾನ್ಯಕ್ಕಿಂತ ಕಡಿಮೆ ಮಳೆ ಎಂದು ಪರಿಗಣಿಸಲಾಗುತ್ತಿತ್ತು. ಹಿಂದೂ ಮಹಾಸಾಗರದ ದ್ವಿಧ್ರುವಿ (ಐಒಡಿ) ಎಂದು ಕರೆಯಲ್ಪಡುವ ಮತ್ತೊಂದು ವಿದ್ಯಮಾನ - ಪಶ್ಚಿಮ ಮತ್ತು ಪೂರ್ವ ಹಿಂದೂ ಮಹಾಸಾಗರದ ನಡುವಿನ ತಾಪಮಾನ ವ್ಯತ್ಯಾಸ - ಹೆಚ್ಚಿನ ಮಳೆಗೆ ಕಾರಣವಾಗಿ ಎಲ್ ನಿನೋದಿಂದ ಆಗುವ ಮಳೆಯ ನಷ್ಟವನ್ನು ಸರಿದೂಗಿಸುತ್ತದೆ ಎಂದು ಅದು ಲೆಕ್ಕಾಚಾರ ಹಾಕಿದೆ. ಎಲ್ ನಿನೊ ವಿದ್ಯಮಾನ ಕಡಿಮೆ ಮಳೆಗೆ ತಾಳೆ ಹಾಕಿಕೊಂಡಷ್ಟು ಶಕ್ತವಾಗಿ ಐಒಡಿ ದಟ್ಟವಾದ ಮಳೆಗೆ ತಾಳೆ ಹಾಕಿಲ್ಲ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ಕಡೆಯ ಬಾರಿ ಎಲ್ ನಿನೊ ಮತ್ತು ಐಒಡಿ ಎರಡೂ ಒಟ್ಟಿಗೆ ಸಂಭವಿಸಿದ್ದು ೧೯೯೭ರಲ್ಲಿ. ಆಗ ವಾಡಿಕೆಗಿಂತ ಶೇ. ೨ರಷ್ಟು ಹೆಚ್ಚಿನ ಮಳೆಯಾಗಿತ್ತು. ಭಾರತ ಕಡೆಯ ಬಾರಿಗೆ ಮುಂಗಾರು ಮಳೆಯಲ್ಲಿ ಶೇ. ೧೦ಕ್ಕಿಂತಲೂ ಹೆಚ್ಚು ಖೋತಾ ವರದಿ ಮಾಡಿದ್ದು ೨೦೧೪ ಮತ್ತು ೨೦೧೫ರಲ್ಲಿರಲ್ಲಿ: ಎರಡೂ ಎಲ್ ನಿನೊ ವರ್ಷಗಳು.

ಐಎಂಡಿ ತನ್ನ ನೂತನ ಮುನ್ಸೂಚನೆಯಲ್ಲಿ ದೇಶದ ಮಳೆಯಾಶ್ರಿತ-ಕೃಷಿ ವಲಯಗಳು ಪಡೆಯುವ ಮಳೆಯು ಸರಾಸರಿಯ ಶೇ.೯೨ ರಿಂದ ಶೇ. ೧೦೪ರ ನಡುವೆ ಇರುತ್ತದೆ ಎಂದು ಒತ್ತಿಹೇಳುತ್ತದೆ. ಇದನ್ನು ತಾಂತ್ರಿಕವಾಗಿ ‘ಸಾಮಾನ್ಯ’ ಮಳೆ ಎಂದು ಕರೆಯಲಾಗಿದ್ದರೂ ಸಂಭವನೀಯ ಮಳೆಯಲ್ಲಿ ಇಷ್ಟು ವ್ಯತ್ಯಾಸ ಇರುವುದು ಬಹುದಿನಗಳ ಕಾಲ ಮಳೆಯಿಲ್ಲದೆ ನಂತರ ಏಕಕಾಲದಲ್ಲಿ ಕುಂಭದ್ರೋಣ ಮಳೆಯಾಗುವ ಸಂಭವವಿದೆ ಎಂಬುದನ್ನು ಸೂಚಿಸುತ್ತದೆ. ಇದು ಪ್ರದೇಶದ ಮಳೆಯ ‘ದತ್ತಾಂಶ’ಕ್ಕೆ ಸಹಾಯ ಮಾಡಬಹುದೇ ಹೊರತು ಕೃಷಿಗಲ್ಲ. ಪ್ರತಿ ಮುಂಗಾರು ತನ್ನದೇ ಆದ ವಿಶಿಷ್ಟತೆಗಳನ್ನು ಹೊಂದಿದ್ದರೂ, ಹವಾಮಾನ ಮುನ್ಸೂಚನಾ ಮಾದರಿಗಳು ಏನೇ ಹೇಳಿದರೂ, ಪ್ರಾದೇಶಿಕವಾಗಿ ಮತ್ತು ಮಳೆ ತಿಂಗಳುಗಳಲ್ಲಿ ಮಳೆಯ ವಿತರಣೆಯನ್ನು ಗಮನಿಸುವುದು ಬಹಳ ಮುಖ್ಯ. ಜುಲೈ ಮತ್ತು ಆಗಸ್ಟ್‌ನಲ್ಲಿ ವಿಶೇಷವಾಗಿ ಮಧ್ಯ ಭಾರತದಲ್ಲಿನ ತೀವ್ರ ಕೊರತೆಯು ಕೃಷಿ ಉತ್ಪಾದನೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಈ ತಿಂಗಳಿನಲ್ಲಿ ಮಳೆಯ ಹೆಚ್ಚು ನಿಖರವಾದ ಮುನ್ನರಿವು ಐಎಂಡಿಯ ಹದಿನೈದು ದಿನಗಳ ಮುನ್ಸೂಚನೆಯಲ್ಲಿ ದೊರೆಯುತ್ತದೆ. ಮುಂಗಾರು ಜೂನ್ ೪ರ ವೇಳೆಗೆ ಕೇರಳದ ತೀರ ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಮುಂಗಾರು ಈ ದಿನಾಂಕಕ್ಕೆ ಸರಿಯಾಗಿ ಇಲ್ಲ ಇದಕ್ಕೂ ಮುಂಚಿತವಾಗಿಯೋ ತಡವಾಗಿಯೋ ಬಂದರೂ ಪ್ರಮುಖ ಮುಂಗಾರು ತಿಂಗಳುಗಳಲ್ಲಿ ಮಳೆಯ ಪ್ರಮಾಣದ ಮೇಲೇನೂ ಪ್ರಭಾವ ಬೀರುವುದಿಲ್ಲ. ಈ ವರ್ಷ, ರಾಜ್ಯಗಳು ಮತ್ತು ಕೇಂದ್ರವು ರೈತರಿಗೆ ನಿಖರವಾದ, ಸಮಯೋಚಿತ ಮಾಹಿತಿಯನ್ನು ತಲುಪಿಸುವ ಪ್ರಯತ್ನಗಳನ್ನು ದ್ವಿಗುಣಗೊಳಿಸಬೇಕು.

Top News Today

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.