ನ್ಯಾಯಕ್ಕಾಗಿ ಕುಸ್ತಿ

ಆಪಾದನೆಗಳ ಬೆಳಕಿನಲ್ಲಿ ಕುಸ್ತಿ ಒಕ್ಕೂಟದ ದುರಸ್ತಿ ಮತ್ತು ಮರುರಚನೆ ಅಗತ್ಯವಾಗಿದೆ

June 02, 2023 10:23 am | Updated 10:23 am IST

ಲೈಂಗಿಕ ದೌರ್ಜನ್ಯದ ಆರೋಪಿಯಾಗಿರುವ ಭಾರತೀಯ ಕುಸ್ತಿ ಒಕ್ಕೂಟದ (WFI) ಅಧ್ಯಕ್ಷ ಮತ್ತು ಭಾರತೀಯ ಜನತಾ ಪಕ್ಷದ ಸಂಸದನಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸುತ್ತಿರುವ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಜೀವಂತವಾಗಿರಿಸಲು ತಮ್ಮ ಯೋಜನೆಗಳ ಬಗ್ಗೆ ಚರ್ಚೆಗಳನ್ನು ಮುಂದುವರಿಸಿದ್ದಾರೆ. ತನಿಖೆಗಳ ತಾಂತ್ರಿಕತೆಯ ಬಗೆಗಿನ ಚರ್ಚೆಗಳಾಗಿ ಈ ಪ್ರತಿಭಟನೆಗಳಿನ್ನು ಉಳಿದಿಲ್ಲ. ಕಾನೂನು ತನಗೆ ಬೇಕಾದ ಹಾದಿ ಹಿಡಿಯುವ ಬಗೆಗಿನ ಹೇಳಿಕೆಯಲ್ಲಿ ಎರಡು ಅಭಿಪ್ರಾಯಗಳು ಇರಲು ಸಾಧ್ಯವಿಲ್ಲ. ಪೋಕ್ಸೋ (POCSO) ಒಳಗೊಂಡಂತೆ ಗಂಭೀರ ಅರೋಪಗಳಿದ್ದಾಗ್ಯೂ ಆಡಳಿತ ಪಕ್ಷದ ಸಂಸದ ಯಾವುದೇ ರೀತಿಯ ರಾಜಕೀಯ ಖಂಡನೆಗೆ ಒಳಗಾಗಿಲ್ಲ ಅನ್ನುವ ವಾಸ್ತವ, ಸಾರ್ವಜನಿಕ ಜೀವನದ ನೈತಿಕತೆಗೆ ಮತ್ತು ಕ್ರೀಡಾ ನಿರ್ವಹಣೆಯ ಅಧಿಕಾರಕ್ಕೆ ಕಳವಳಕಾರಿಯಾದ ಸಂಗತಿಯಾಗಿದೆ. ಸಿಂಗ್ ವಿರುದ್ಧದ ಪ್ರಕರಣಗಳು ತನಿಖೆಯ ಹಂತದಲ್ಲಿವೆ ಮತ್ತು ನ್ಯಾಯಾಲಯಕ್ಕೆ ತನಿಖೆಯ ಪ್ರಗತಿಯ ವರದಿಯನ್ನು ಸಲ್ಲಿಸಲಾಗುವುದು ಎಂದು ದೆಹಲಿಯ ಪೊಲೀಸರು ಹೇಳುತ್ತಲೇ ಇದ್ದಾರೆ. ಈ ಪ್ರತಿಪಾದನೆಗಳನ್ನು ಮಾಡಿದ ತನ್ನದೇ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳನ್ನು ಪೊಲೀಸ್ ಪಡೆ ತೆಗೆದುಹಾಕಬೇಕಾಯಿತು ಎಂಬ ಸಂಗತಿ ಈ ತನಿಖೆಯ ಪಕ್ಷಾತೀತತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ. ಮಂಗಳವಾರ ಗಂಗಾ ನದಿಯಲ್ಲಿ ತಮ್ಮ ಪದಕಗಳನ್ನು ಮುಳುಗಿಸಿಬಿಡುತ್ತೇವೆಂದು ಸೇರಿದ್ದ ಕುಸ್ತಿಪಟುಗಳ (ಅಂತಾರಾಷ್ಟ್ರೀಯ ಪದಕ ವಿಜೇತರೂ ಇದರಲ್ಲಿ ಇದ್ದಾರೆ) ಪ್ರತಿಭಟನೆ ಭಾವನಾತ್ಮಕ ತಿರುವು ಪಡೆಯಿತು. ಕೊನೆಯ ಕ್ಷಣದಲ್ಲಿ ತಮ್ಮ ಹೆಜ್ಜೆಯನ್ನು ಹಿಂದಿಟ್ಟರಾದರೂ, ನ್ಯಾಯಕ್ಕಾಗಿ ಗಟ್ಟಿಧ್ವನಿ ಎತ್ತುವುದರಿಂದ ಹಿಂದೆಸರಿಯಲು ನಿರಾಕರಿಸುತ್ತಿದ್ದಾರೆ.

ಈ ಪ್ರತಿಭಟನೆ ನಾಗರಿಕ ಸಮಾಜದಿಂದ ಬೆಂಬಲ ಗಳಿಸಿದೆ, ಮತ್ತು ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿ ಮತ್ತು ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಈ ಬೆಳವಣಿಗೆಯನ್ನು ಗಮನಿಸಿದ್ದು, ಹೊಸ ಸಂಸತ್ ಭವನದ ಉದ್ಘಾಟನೆಯ ದಿನದಂದು ನಡೆದ ಕುಸ್ತಿಪಟುಗಳ ಮೇಲಿನ ಪೊಲೀಸರ ದಮನಕಾರಿ ನಡೆಯನ್ನು ಖಂಡಿಸಿವೆ. ಪ್ರತಿಭಟನೆಗಳನ್ನು ಬಲಪಡಿಸಲು ಉತ್ತರ ಪ್ರದೇಶ ಮತ್ತು ಹರ್ಯಾಣದ ಜಾಟ್ ರೈತ ಮುಖಂಡರು ಕೂಡ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದಾರೆ. ಏತನ್ಮಧ್ಯೆ ಆಡಳಿತ ಪಕ್ಷದಿಂದ ಖಂಡನೆಯನ್ನು ಎದುರಿಸಬೇಕಿದ್ದ ಆರೋಪಿ ಸಿಂಗ್ ಗೆ ಬದಲಾಗಿ ಪಕ್ಷದ ಮುಖಂಡರುಗಳ ಪ್ರೋತ್ಸಾಹ ದೊರಕಿದೆ. ಬೆಂಬಲಿಗರನ್ನು ಸಂಘಟಿಸುತ್ತಿರುವುದಕ್ಕೆ ಕುಸ್ತಿಪಟುಗಳ ಮೇಲೆ ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಈ ಬಲಶಾಲಿ ಸಂಸದ ಹರಿಹಾಯ್ದಿದ್ದಾನೆ. ಒಮ್ಮೆ ಟಾಡಾ (TADA) ಪ್ರಕರಣದಲ್ಲಿ ಆರೋಪಿಯಾಗಿದ್ದ ಸಿಂಗ್ ಬಿಜೆಪಿ ಪಕ್ಷದ ಸಂರಚನೆಗೆ ಬಹಳ ಅಮೂಲ್ಯ ವ್ಯಕ್ತಿಯಂತೆ ಕಾಣುತ್ತಿದ್ದಾನೆ. ತನಿಖೆ ಮತ್ತು ವಿಚಾರಣೆಯ ಪ್ರಕ್ರಿಯೆಯಿಲ್ಲದೆ ಯಾರನ್ನಾದರೂ ಶಿಕ್ಷಿಸಬಲ್ಲ ಯಾವುದೇ ಪ್ರಕರಣವಿರಲು ಸಾಧ್ಯವಿಲ್ಲ ಆದರೆ ಪ್ರಾಮಾಣಿಕತೆ ಮತ್ತು ನೈತಿಕತೆಯ ಪ್ರಶ್ನೆ ಉನ್ನತ ಮಟ್ಟದ್ದಾಗಿರಬೇಕು. ಸಿಂಗ್ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಪ್ರತಿಷ್ಠಿತ ಕ್ರೀಡಾ ಸಂಸ್ಥೆಯನ್ನು ಮುನ್ನಡೆಸುವ ಆತನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಬೀದಿಯಲ್ಲಿ ನಡೆಯುವ ಪ್ರತಿಭಟನೆಗಳು ಕ್ರಿಮಿನಲ್ ಅಪರಾಧದ ತನಿಖೆಯನ್ನು ಪ್ರಭಾವಿಸಬಾರದಾದರೂ, ಎಲ್ಲರಿಗೂ, ಅದರಲ್ಲೂ ಮುಖ್ಯವಾಗಿ ಸಂತ್ರಸ್ತರಿಗೆ ಮತ್ತು ಅತಿಕ್ರಮಣಕಾರರಿಗೆ, ಒಂದು ಸಂದೇಶ ಸ್ಪಷ್ಟವಾಗಿರಬೇಕು -- ಭಾರತದಲ್ಲಿ ಲೈಂಗಿಕ ದೌರ್ಜ್ಯನ್ಯದ ಬಗ್ಗೆ ಸಹನೆ ಶೂನ್ಯ ಎಂಬ ಸಂದೇಶ.

Top News Today

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.