ಕಚ್ಚಾ ತೈಲದ ಮೇಲೆ ಕಣ್ಣು

ಭಾರತವು ಪಂಪುಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ತೈಲ ಬೆಲೆಗೆ ಅನುಗುಣವಾಗಿ ನಿರ್ಧರಿಸಬೇಕು

June 06, 2023 10:55 am | Updated 10:55 am IST

ಸಾಮಾನ್ಯವಾಗಿ ಒಪೆಕ್+ ಎಂದು ಕರೆಯಲ್ಪಡುವ ವಿಶ್ವದ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕರ ಗುಂಪು ೨೦೨೪ಕ್ಕೂ ಉತ್ಪಾದನಾ ಕಡಿತವನ್ನು ವಿಸ್ತರಿಸಲು ಭಾನುವಾರ ನಿರ್ಧರಿಸಿತು. ಜಾಗತಿಕ ಆರ್ಥಿಕ ಕುಸಿತದ ಬಗ್ಗೆ ಕಳವಳದ ನಡುವೆ ತೈಲ ಬೆಲೆಗಳು ಕುಸಿಯದಂತೆ ನೋಡಿಕೊಳ್ಳಲು ಈ ಪ್ರಯತ್ನ. ಒಪೆಕ್+ನ ಪ್ರಮುಖ ಸದಸ್ಯ ಮತ್ತು ಮುಂಚೂಣಿ ತೈಲ ಉತ್ಪಾದಕ ಸೌದಿ ಅರೇಬಿಯಾ ಕೂಡ ಜುಲೈನಲ್ಲಿ ದಿನಕ್ಕೆ ಹೆಚ್ಚುವರಿ ಒಂದು ಮಿಲಿಯನ್ ಬ್ಯಾರೆಲ್‌ಗಳಷ್ಟು ಉತ್ಪಾದನೆಯನ್ನು ಕಡಿತಗೊಳಿಸಲು ನಿಶ್ಚಯಿಸಿತು. ಇದು ಸೋಮವಾರ ಅಂತರರಾಷ್ಟ್ರೀಯ ತೈಲ ಬಾಂಡುಗಳ ಬೆಲೆ ಏರಿಕೆಗೆ ಕಾರಣವಾಯಿತು. ಇಪ್ಪತ್ತಕ್ಕೂ ಹೆಚ್ಚು ರಾಷ್ಟ್ರಗಳ ಒಪೆಕ್+ ಆರ್ಥಿಕ ಹಿಂಜರಿತದ ಕಾರಣವಾಗಿ ಕುಸಿಯುತ್ತಿರುವ ಬೇಡಿಕೆಯ ಹಿನ್ನಲೆಯಲ್ಲಿ ಬೆಲೆಗಳು ಮತ್ತಷ್ಟು ಕುಸಿಯದಂತೆ ತಡೆಯಲು ಪೂರೈಕೆಯನ್ನು ಮೊಟಕುಗೊಳಿಸಲು ಶ್ರಮಿಸುತ್ತಿದೆ. ಏಪ್ರಿಲ್ಲಿನಲ್ಲಿ ದಿನವೊಂದಕ್ಕೆ ೧.೬೬ ಮಿಲಿಯನ್ ಬ್ಯಾರೆಲ್ ಅಷ್ಟು ಉತ್ಪಾದನೆಯ ಹೆಚ್ಚುವರಿ ಕಡಿತವನ್ನು ಘೋಷಿಸಿತು. ಆದರೆ ಕಚ್ಚಾ ತೈಲದ ಬೆಲೆಯ ಮೇಲೆ ಇದರ ಪ್ರಭಾವ ಅಲ್ಪಾವಧಿಯವರೆಗೆ ಮಾತ್ರವೇ ಇತ್ತು. ಬ್ಯಾರೆಲ್ಲೊಂದರ ಬೆಲೆ $೮೭ವರೆಗೂ ಏರಿ ಮತ್ತೆ ಇಳಿದು ಈಗ $೮೦ಗಿಂತಲೂ ಕಡಿಮೆಯೇ ಇದೆ. ತನ್ನ ಕಚ್ಚಾ ತೈಲದ ಅಗತ್ಯತೆಗಳಲ್ಲಿ ಶೇ. ೮೦ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುವ ಭಾರತಕ್ಕೆ ಜಾಗತಿಕ ಕಚ್ಚಾ ತೈಲ ಬೆಳೆಯನ್ನು ಏರಿಸುವ ಸಾಮರ್ಥ್ಯ ಇರುವ ಸೌದಿ ಮತ್ತು ಒಪೆಕ್+ನ ಉತ್ಪಾದನಾ ಕಡಿತ ಘೋಷಣೆ ಕಳವಳಕಾರಿ ಹೌದು. ಆದರೆ ಯುಕ್ರೇನ್ ಮೇಲೆ ರಷ್ಯಾ ಆಕ್ರಮಣದ ನಂತರ ಭಾರತವು ರಷ್ಯಾದಿಂದ ಕಚ್ಚಾತೈಲದ ಖರೀದಿಯನ್ನು ತೀವ್ರವಾಗಿ ಹೆಚ್ಚಿಸಿದೆ. ಅತ್ತ ರಷ್ಯಾದ ತೈಲ ರಫ್ತುಗಳ ಮೇಲೆ ಪಶ್ಚಿಮವು ವಿಧಿಸಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ಭಾರತ ಒಂದು ಬ್ಯಾರೆಲ್ ತೈಲಕ್ಕೆ ತೆರುತ್ತಿರುವ ಬೆಲೆ ಸ್ಥಿರವಾಗಿ ಕುಸಿಯುತ್ತಲೇ ಇದೆ. ಕಳೆದ ವಾರದ ಅಂತ್ಯದ ವೇಳೆಗೆ ಭಾರತದ ಕಚ್ಚಾ ತೈಲದ ಬುಟ್ಟಿಯ ಮಾಸಿಕ ಸರಾಸರಿ ಬೆಲೆಯು ಅದರ ಜೂನ್ ೨೦೨೨ರ ಗರಿಷ್ಠ ಮಟ್ಟ ಬ್ಯಾರೆಲ್ಲಿಗೆ $೧೧೬.೦೧ ನಿಂದ $೭೨.೩೯ಗೆ, ಅಂದರೆ ಶೇ. ೩೮ರಷ್ಟು ಕಡಿಮೆಯಾಗಿದೆ. ಇತ್ತೀಚಿನ ಒಪೆಕ್+ ಕ್ರಮದ ಪರಿಣಾಮವಾಗಿ ಜಾಗತಿಕ ತೈಲ ಬೆಲೆಗಳಲ್ಲಿ ಕೊಂಚ ಏರಿಕೆ ಕಂಡುಬರಬಹುದು ನಿಜ. ಆದರೆ ಭಾರತವು ಮಾರ್ಚಿನಲ್ಲಿ ತನ್ನ ಅವಶ್ಯಕತೆಯ ಮೂರನೇ ಒಂದು ಭಾಗದಷ್ಟು ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿರುವುದರಿಂದ ಈ ಸಂಭಾವ್ಯ ಬೆಲೆ ಏರಿಕೆಯ ವಿರುದ್ಧ ತಕ್ಕಮಟ್ಟಿಗಿನ ರಕ್ಷಣೆ ಸಾಧಿಸಿದೆ. ಆದರೂ, ಕಚ್ಚಾ ತೈಲ ಖರೀದಿ ಬೆಲೆಯಲ್ಲಿನ ಇಳಿಕೆಯ ಲಾಭವು ಭಾರತದ ಗ್ರಾಹಕರಿಗೆ ತಲುಪಿಲ್ಲ. ಪೆಟ್ರೋಲ್ ಮತ್ತು ಡೀಸೆಲ್‌ನ ಪಂಪ್ ಬೆಲೆಗಳು ಮೇ ೨೨, ೨೦೨೨ರಿಂದ ಬದಲಾಗದೆ ಸ್ಥಿರವಾಗಿ ಉಳಿದಿವೆ. ಕೇಂದ್ರ ಮತ್ತು ರಾಜ್ಯಗಳಲ್ಲಿನ ಸರ್ಕಾರಗಳು ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಯಾವುದೇ ಆದಾಯವನ್ನು ಬಿಡಲು ಸಿದ್ಧರಿಲ್ಲ. ಇದು ಪ್ರಾಯಶಃ ವೆಚ್ಚದಲ್ಲಿನ ಯಾವುದೇ ಏರಿಕೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಮಾರ್ಗವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಚಿಲ್ಲರೆ ಹಣದುಬ್ಬರವು ಇಳಿಮುಖವಾಗುವ ಲಕ್ಷಣಗಳನ್ನು ತೋರಿಸುವುದರೊಂದಿಗೆ ಮತ್ತು ಹಣದುಬ್ಬರದ ಕಾರಣವಾಗಿ ಬಳಕೆಯ ಸಾಮರ್ಥ್ಯದ ಕುಸಿತದ ಹಿನ್ನಲೆಯಲ್ಲಿ, ನೀತಿ ನಿರೂಪಕರು ಇಂಧನ ಬೆಲೆಗಳ ಮೇಲಿನ ತಮ್ಮ ನಿಲುವನ್ನು ಮರುಮೌಲ್ಯಮಾಪನ ಮಾಡಬೇಕು. ಇಂಧನ ಬೆಲೆಗಳನ್ನು ತರ್ಕಬದ್ಧಗೊಳಿಸಲು ಸಹಾಯ ಮಾಡಲು ತೈಲ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಯಲ್ಲಿ ತರುವ ಬೇಡಿಕೆಯು ರಾಜ್ಯಗಳ ಆದಾಯದ ಮೇಲೆ ಬೀರುವ ಅಡ್ಡ ಪರಿಣಾಮದ ಕಾರಣವಾಗಿ ಶೀಘ್ರದಲ್ಲೇ ಈಡೇರುವ ಸಾಧ್ಯತೆಯಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮುಂದಾಳತ್ವ ವಹಿಸಿ ಪ್ರಮುಖ ಸಾರಿಗೆ ಇಂಧನಗಳ ಮೇಲಿನ ಸುಂಕಗಳನ್ನು ಕಡಿತಗೊಳಿಸುವ ಮೂಲಕ ಆರ್ಥಿಕತೆಗೆ ಹಣಕಾಸಿನ ನೆರವು ನೀಡಬಹುದು.

Top News Today

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.