ದುರಂತದ ಹಳಿಗಳು

ರೈಲ್ವೆಯು ತನ್ನ ಸೇವೆಗಳನ್ನು ವಿಸ್ತರಿಸುತ್ತಾ ಸುರಕ್ಷತೆಯ ಮೇಲೆ ಗಮನ ಕಳೆದುಕೊಳ್ಳಬಾರದು

June 06, 2023 11:11 am | Updated 11:11 am IST

ಜೂನ್ 2 ರಂದು ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲುಗಳು ಡಿಕ್ಕಿಯಾಗಿ ನಡೆದ ಅಪಘಾತವು ತನ್ನ ರೈಲು ಸೇವೆಗಳನ್ನು ಆಧುನೀಕರಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ಭಾರತ ಎದುರಿಸುತ್ತಿರುವ ಸವಾಲುಗಳ ದುರಂತ ಜ್ಞಾಪನೆಯಾಗಿದೆ. ಎರಡು ದಶಕಗಳಲ್ಲಿ ನಡೆದ ಅತಿ ಭೀಕರ ರೈಲು ಅಪಘಾತವಿದು. ಶಾಲಿಮಾರ್-ಚೆನ್ನೈ-ಕೋರಮಂಡಲ್ ಎಕ್ಸ್‌ಪ್ರೆಸ್, ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ರೈಲು ಡಿಕ್ಕಿ ಹೊಡೆದು ಕನಿಷ್ಠ ೨೭೫ ಜನ ಸಾವನ್ನಪ್ಪಿದ್ದರೆ, ೯೦೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಆದರೆ ಈ ರೀತಿಯ ಅಪಘಾತದ ಮುನ್ಸೂಚನೆ ಇತ್ತು. ಈ ವರ್ಷದ ಫೆಬ್ರವರಿಯಲ್ಲೇ ರೈಲ್ವೆಯ ಮೈಸೂರು ವಿಭಾಗದ ಬೀರೂರು-ಚಿಕ್ಕಜಾಜೂರು ವಿಭಾಗದ ಹೊಸದುರ್ಗ ರಸ್ತೆ ನಿಲ್ದಾಣದಲ್ಲಿ ಎರಡು ರೈಲುಗಳ ನಡುವೆ ಡಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿತು. ರೈಲು ಚಾಲಕನ ಸಮಯಪ್ರಜ್ಞೆ ಮತ್ತು ರೈಲು ನಿಲ್ಲಿಸಬಹುದಾದಷ್ಟು ನಿಧಾನವಾಗಿ ಚಲಿಸುತ್ತಿದ್ದದ್ದರಿಂದಷ್ಟೇ ಅಂದು ದುರಂತವೊಂದು ತಪ್ಪಿತು. ರೈಲು ಹೋಗಬೇಕಿದ್ದ ಹಳಿಯನ್ನು ಬಿಟ್ಟು ಬೇರೆ ಹಳಿಯ ಮೇಲೆ ಹೋಗಿಬಿಟ್ಟಿತ್ತು. ಇದು ದೋಷಯುಕ್ತ ಸಿಗ್ನಲಿಂಗ್ ವ್ಯವಸ್ಥೆ ಮತ್ತು ಅಪಾಯಕಾರಿ ಮಾನವ ಹಸ್ತಕ್ಷೇಪದ ಪರಿಣಾಮ ಎಂದು ತನಿಖಾ ವರದಿ ತಿಳಿಸಿತ್ತು. ಈ ವರದಿಯು “ಕೂಡಲೇ ಸಿಗ್ನಲ್ ವ್ಯವಸ್ಥೆಯ ದೋಷಗಳನ್ನು ಸರಿಪಡಿಸಲು ಮತ್ತು ಶಾರ್ಟ್‌ಕಟ್‌ಗಳಿಗೆ ಹೋಗದಂತೆ ಸಿಬ್ಬಂದಿಯನ್ನು ಸಂವೇದನಾಶೀಲಗೊಳಿಸಲು” ಕರೆ ನೀಡಿತ್ತು. ಬಾಲಸೋರಿನ ಅಪಘಾತದ ಪ್ರಾಥಮಿಕ ವಿಚಾರಣೆಯಲ್ಲಿ ಇದೇ ಸಮಸ್ಯೆ ಮತ್ತೆ ಕಂಡುಬರುತ್ತಿದೆ.

ಕೋವಿಡ್-19 ಸಾಂಕ್ರಾಮಿಕ ರೋಗ ಅಪ್ಪಳಿಸುವುದಕ್ಕಿಂತ ಮುಂಚೆ ದಿನ ೨೩ ಮಿಲಿಯನ್‌ ಪ್ರಯಾಣಿಕರನ್ನು ಭಾರತೀಯ ರೈಲ್ವೆ ಒಯ್ದಿದ್ದರೆ, ಈಗ ಪ್ರತಿದಿನ ಸುಮಾರು ೧೫ ಮಿಲಿಯನ್ ಪ್ರಯಾಣಿಕರನ್ನು ಒಯ್ಯುತ್ತದೆ. ಭಾರತ ತನ್ನ ರೈಲು ಮೂಲಸೌಕರ್ಯವನ್ನು ಸುಧಾರಿಸಲು ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಿದೆ ಮತ್ತು ೨೦೨೩-೨೪ ರಲ್ಲಿ ₹೨.೪ ಲಕ್ಷ ಕೋಟಿ ಬಂಡವಾಳ ಹೂಡಿದೆ. ಪ್ರತಿ ಮಿಲಿಯನ್ ರೈಲು ಕಿಲೋಮೀಟರುಗಳಿಗೆ ಅಪಘಾತಗಳು ಕಳೆದ ದಶಕದಲ್ಲಿ ಕಡಿಮೆಯಾಗಿದೆ. ಆದರೆ ಹಳಿಗಳ ಕಳಪೆ ನಿರ್ವಹಣೆ, ಕಳಪೆ ರೋಲಿಂಗ್ ಸ್ಟಾಕ್ ಮತ್ತು ಸಿಬ್ಬಂದಿ ಕೊರತೆಯನ್ನು ರೈಲ್ವೆಯು ಇನ್ನು ಮರೆಮಾಚಲಾಗುವುದಿಲ್ಲ. ಘರ್ಷಣೆ-ತಡೆ ವ್ಯವಸ್ಥೆಗಳು ಸೇರಿದಂತೆ ಸುರಕ್ಷತಾ ಕ್ರಮಗಳೂ ವಿಸ್ತರಿಸುತ್ತಿವೆ. ಆದರೆ ಅದು ಅಗತ್ಯವಾದ ವೇಗದಲ್ಲಲ್ಲ ಎಂಬುದು ಸ್ಪಷ್ಟ. ೨೦೨೧ರಲ್ಲಿ ವಂದೇ ಭಾರತ್ ಎಂದು ಹೆಸರಿಸಲಾದ ೭೫ ಹೊಸ ಸೆಮಿ-ಹೈ ಸ್ಪೀಡ್ ರೈಲುಗಳನ್ನು ೭೫ ವಾರಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಪ್ರಧಾನಿ ಘೋಷಿಸಿದರು ಮತ್ತು ಈಗಾಗಲೇ ಹಲವಾರು ರೈಲುಗಳನ್ನು ಪ್ರಾರಂಭಿಸಲಾಗಿದೆ. ಪ್ರಯಾಣಿಕರ ಸೌಕರ್ಯಗಳ ಬಗ್ಗೆಯೂ ಗಮನ ಹರಿಸಲಾಗಿದೆ. ಆದರೆ ಸುರಕ್ಷತೆಗಿಂತ ಮುಖ್ಯವಾದುದು ಯಾವುದೂ ಇಲ್ಲ. ಬಾಲಸೋರ್‌ನಲ್ಲಿ ಸಂಭವಿಸಿದ ಅಪಘಾತವು ಭಾರತದ ರೈಲ್ವೇ ಅಭಿವೃದ್ಧಿ ಯೋಜನೆಗಳನ್ನು ಸರಿಯಾದ ಹಳಿಗೆ ತರಬೇಕು. ವೇಗಕ್ಕಾಗಿ ಶ್ರಮಿಸಬೇಕು, ಆದರೆ ಸುರಕ್ಷತೆಯು ಆದ್ಯತೆಯಾಗಬೇಕು. ಬಾಲಸೋರ್ ಅಪಘಾತ ವಿಧ್ವಂಸಕ ಕೃತ್ಯವೇ ಎಂಬ ಪ್ರಶ್ನೆಯೂ ಇದೆ. ಇದನ್ನು ಕೇಂದ್ರ ತನಿಖಾ ದಳ ತನಿಖೆ ಮಾಡುತ್ತಿದೆ. ಇದರ ನಡುವೆ ಕಾರ್ಯಾಚರಣೆ ಮತ್ತು ಯೋಜನಾ ಹಂತಗಳಲ್ಲಿ ರೈಲ್ವೆಯನ್ನು ಸರಿಪಡಿಸುವ ಕ್ರಮಗಳು ಹೆಚ್ಚು ಮುಖ್ಯವಾಗಿರುತ್ತದೆ. ರೈಲ್ವೆ ಆಧುನೀಕರಣಕ್ಕೆ ಹೆಚ್ಚಿನ ಸಂಪನ್ಮೂಲಗಳನ್ನು ಒಟ್ಟು ಮಾಡಬೇಕಿದೆ.

Top News Today

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.