ಉಪಯುಕ್ತ ಮೊದಲ ಹೆಜ್ಜೆ

ಮಣಿಪುರದಲ್ಲಿ ಹಿಂಸಾಚಾರದ ಹಿಂದಿನ ಸಮಸ್ಯೆಗಳು ಜಟಿಲವಾದವು, ಆದರೆ ಸತ್ಯ ಹೇಳುವುದು ಪರಿಹಾರದತ್ತ ಸಾಗುವ ದಾರಿಯಾದೀತು

June 07, 2023 07:22 am | Updated 07:22 am IST

ಮಣಿಪುರದಲ್ಲಿ ಸುಮಾರು ೧೦೦ ಜನರನ್ನು ಬಲಿತೆಗೆದುಕೊಂಡ ಮತ್ತು ೩೫೦೦೦ಕ್ಕೂ ಹೆಚ್ಚು ಜನರನ್ನು ಬೀದಿಗೆ ತಳ್ಳಿದ ಜನಾಂಗೀಯ ಹಿಂಸಾಚಾರದ ತನಿಖೆಗಾಗಿ ಕೇಂದ್ರ ಸರ್ಕಾರವು ಮೂರು ಸದಸ್ಯರ ಸಮಿತಿ ರಚಿಸಿರುವುದು ಸ್ವಾಗತಾರ್ಹ. ಸಮಿತಿಯ ಉಲ್ಲೇಖಿತ ನಿಯಮಗಳು ಸ್ಪಷ್ಟವಾಗಿವೆ - ಹಿಂಸಾಚಾರ ಭುಗಿಲೇಳಲು ಕಾರಣಗಳೇನು, ಅದು ಅಷ್ಟು ವ್ಯಾಪಕವಾಗಿ ಹರಡಿದ್ದು ಹೇಗೆ ಮತ್ತು ಅಧಿಕಾರಿಗಳಿಂದ ಯಾವುದೇ ಕರ್ತವ್ಯಲೋಪವಿದೆಯೇ ಎಂದು ವಿಚಾರಣೆ ನಡೆಸುವುದು. ಈ ಪ್ರಕ್ರಿಯೆಯು ಸತ್ಯ ಹೊರಗೆಳೆಯುವುದನ್ನು ಪ್ರೋತ್ಸಾಹಿಸುತ್ತದೆ ಮತ್ತು ಇದು ಮುನಿಸಿಕೊಂಡಿರುವ ಸಮುದಾಯಗಳ ನಡುವೆ ಶಾಂತಿ ಸ್ಥಾಪನೆಯ ಪ್ರಕ್ರಿಯೆಗೆ ಚಾಲನೆ ನೀಡುವ ಸಾಮರ್ಥ್ಯ ಹೊಂದಿದೆ. ಗಲಭೆಗಳು, ಮತ್ತು ವಿಶೇಷವಾಗಿ ಜನಾಂಗೀಯ ಹಿಂಸಾಚಾರಗಳು, ಪ್ರಚೋದನೆಯಿಲ್ಲದೆ ನಡೆಯುವುದಿಲ್ಲ. ಮಣಿಪುರದಲ್ಲಿ ಪೊಲೀಸ್ ಶಸ್ತ್ರಾಗಾರಗಳಿಂದ ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ಈ ಹಿಂಸಾಚಾರದಲ್ಲಿ ಬಳಸಲಾಗಿದೆ ಎಂಬುದು ಇಂಥದೇ ಸಾಧ್ಯತೆಯತ್ತ ಬೊಟ್ಟು ಮಾಡುತ್ತಿದೆ. ಹಿಂಸೆಗೆ ಪ್ರಚೋದಿಸಿದವರನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಸರ್ಕಾರದ ಮೇಲೆ ಮತ್ತೆ ನಂಬಿಕೆ ಮೂಡಿಸುವ ಮೊದಲ ಹೆಜ್ಜೆ. ಕೇಂದ್ರ ಗೃಹ ಸಚಿವರು ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರವೂ ರಾಜ್ಯದಲ್ಲಿ ಹಿಂಸಾಚಾರ ಮುಂದುವರಿದಿದೆ ಮತ್ತು ಲೂಟಿ ಮಾಡಿದ ಶಸ್ತ್ರಾಸ್ತ್ರಗಳಲ್ಲಿ ಕೇವಲ ಶೇ. ೧೮ರಷ್ಟು ಮಾತ್ರ ಶಸ್ತ್ರಾಗಾರಗಳಿಗೆ ಮರಳಿದೆ ಎಂಬುದು ಮೈಟೀ ಮತ್ತು ಕುಕಿಗಳ ನಡುವೆ ಇನ್ನೂ ಅಪನಂಬಿಕೆ ಇದೆ ಎಂಬುದನ್ನು ಸೂಚಿಸುತ್ತದೆಯಷ್ಟೇ ಅಲ್ಲ ಶಾಂತಿ ಸ್ಥಾಪನೆ ಮಾಡುವಲ್ಲಿ ರಾಜ್ಯ ಸರ್ಕಾರದ ಅಸಮರ್ಥತೆಯನ್ನೂ ಸೂಚಿಸುತ್ತದೆ.

ಮತ್ತೆ ಹಿಂಸಾಚಾರ ಭುಗಿಲೇಳದಂತೆ ತಡೆಯಲು ಮೈಟೀ ಜನರು ವಾಸಿಸುವ ಇಂಫಾಲ್ ಕಣಿವೆ ಮತ್ತು ಕುಕಿಗಳು ವಾಸಿಸುವ ಪಕ್ಕದ ಗುಡ್ಡಗಾಡು ಪ್ರದೇಶಗಳ ನಡುವೆ ಭದ್ರತಾ ಪಡೆಗಳು ಗಸ್ತು ತಿರುಗುತ್ತಿವೆ. ಆದರೆ ಇದರಿಂದ ಹೇಚ್ಚೇನೂ ಸಹಾಯ ಆಗುವುದಿಲ್ಲ. ಎರಡೂ ಸಮುದಾಯಗಳ ರಾಜಕೀಯ ಪ್ರತಿನಿಧಿಗಳು, ವಿಶೇಷವಾಗಿ ಒಂದೇ ಪಕ್ಷದಲ್ಲಿರುವ ಎರಡೂ ಸಮುದಾಯಗಳ ಶಾಸಕರು, ಶಾಂತಿ ಮತ್ತು ಸಾಮರಸ್ಯದ ವಾಹಕಗಳಾಗಿ ಕಾರ್ಯನಿರ್ವಹಿಸಬೇಕು. ಎರಡೂ ಗುಂಪುಗಳ ನಡುವಿನ ಬಿಕ್ಕಟ್ಟು ಪರಿಹರಿಸುವುದು ಸುಲಭವಲ್ಲ, ಅದಕ್ಕೆ ಸುದೀರ್ಘ ಮಾತುಕತೆಗಳ ಅಗತ್ಯವಿದೆ. ಕುಕಿ ಮತ್ತು ನಾಗಾಗಳೂ ಸೇರಿದಂತೆ ಅನೇಕ ಬುಡಕಟ್ಟುಗಳು ಮೈಟೀ ಜನಾಂಗಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವುದನ್ನು ಬಲವಾಗಿ ವಿರೋಧಿಸುತ್ತವೆ. ಮೈಟೀ ಸಮುದಾಯದ ಜನ ಗಿರಿಜನರಿಗೆ ಮೀಸಲಾತಿಯಿಂದ ನೀಡಲಾಗುತ್ತಿರುವ ವಿಶೇಷ ಸವಲತ್ತುಗಳ ಬಗ್ಗೆ ಅಸಮಾಧಾನಿತರಾಗಿದ್ದಾರೆ. ಇಂಫಾಲ ಕಣಿವೆಯಲ್ಲಿ ಯಾರಾದರೂ ಭೂಮಿ ಕೊಳ್ಳಬಹುದು ಆದರೆ ಗಿರಿ ಪ್ರದೇಶಗಳಲ್ಲಿ ಗಿರಿಜನರು ಮಾತ್ರ ಭೂಮಿ ಕೊಳ್ಳಬಹುದು, ಮೈಟೀ ಜನ ಭೂಮಿ ಕೊಳ್ಳುವಂತಿಲ್ಲ ಎಂಬುದು ಆಳವಾದ ಅಸಮಾಧಾನ ಹುಟ್ಟುಹಾಕಿದೆ. ಕುಕಿ ಭೂಮಾಲೀಕತ್ವ ಮತ್ತು ವಾಸಸ್ಥಳದ ಐತಿಹಾಸಿಕ ಮಾದರಿಗಳು ಅವರು ಕಾಯ್ದಿರಿಸಿದ ಅರಣ್ಯಗಳನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂಬ ಆರೋಪಗಳನ್ನು ಹೊರುವಂತೆ ಮಾಡಿದೆ ಮತ್ತು ಅಂತಹ ಪ್ರದೇಶಗಳನ್ನು ತೆರವುಗೊಳಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳು ಅವರಲ್ಲಿ ತಮ್ಮನ್ನು ಗುರಿ ಮಾಡಲಾಗುತ್ತಿದೆ ಎಂಬ ಭಾವನೆ ಮೂಡಿಸಿದೆ. ಈ ಸಮಸ್ಯೆಗಳನ್ನು ನಿಭಾಯಿಸದ ಹೊರತು ಈ ಸಮುದಾಯಗಳ ನಡುವೆ ಶಾಂತಿ ಸ್ಥಾಪನೆ ಕಷ್ಟ. ಇದು ಸಾಧ್ಯವಾಗಬೇಕಾದರೆ ಈ ಸಮುದಾಯಗಳ ಪ್ರತಿನಿಧಿಗಳು ತಮ್ಮ ಸಂಕುಚಿತ ಪಂಥೀಯತೆಯನ್ನು ಮೀರಿ ಸಾಂವಿಧಾನಿಕ ಪರಿಹಾರಗಳನ್ನು ಹುಡುಕಬೇಕು. ಹಿಂಸಾಚಾರವನ್ನು ಹತ್ತಿಕ್ಕಲು, ನೆಲೆ ಕಳೆದುಕೊಂಡವರನ್ನು ಅವರ ಮನೆಗಳಿಗೆ ಮರಳುವಂತೆ ಮಾಡಲು, ಅವರ ಜೀವನವನ್ನು ಭದ್ರಪಡಿಸಲು ಮತ್ತು ಹಿಂಸಾಚಾರಕ್ಕೆ ಕಾರಣರಾದವರನ್ನು ಕಾನೂನು ರೀತ್ಯಾ ಶಿಕ್ಷೆಗೆ ಗುರಿಪಡಿಸಲು ಒಂದು ಆರಂಭ ಮಾಡಬೇಕಿದೆ. ಇದೆಲ್ಲವೂ ಈ ಸಮಿತಿಯ ಕಾರ್ಯವೈಖರಿಯ ಮೇಲೆ ಅವಲಂಬಿತವಾಗಿದೆ.

Top News Today

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.