ಮತ್ತೊಂದು ಕುಸಿತ

ಸಿಖ್ ಉಗ್ರವಾದದ ಬಗ್ಗೆ ಭಾರತದ ಕಳವಳವನ್ನು ಪರಿಹರಿಸಲು ಕೆನಡಾ ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ

June 09, 2023 12:15 pm | Updated 12:15 pm IST

ಕೆನಡಾದ ಬ್ರಾಂಪ್ಟನ್‌ನಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ವೈಭವೀಕರಿಸುವ ಸ್ತಬ್ಧಚಿತ್ರ ಮೆರವಣಿಗೆ (ಟ್ಯಾಬ್ಲೋ), ಭಾರತದ ರಾಜಕೀಯ ವಲಯದಲ್ಲಿ ಆಕ್ರೋಶಕ್ಕೆ ಎಡೆಮಾಡಿದೆ. 1984ರ ಆಪರೇಷನ್ ಬ್ಲೂಸ್ಟಾರ್ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ನಡೆಸುವ ಕೆನಡಾದ ಸಿಖ್ ಪ್ರತ್ಯೇಕತಾವಾದಿ ಅಥವಾ “ಖಾಲಿಸ್ತಾನಿ” ಗುಂಪುಗಳ ವಾರ್ಷಿಕ ಪರೇಡ್‌ನ ಭಾಗವಾಗಿತ್ತು ಇದು. ಮೆರೆವಣಿಗೆಯಲ್ಲಿ ಹಿಡಿದಿದ್ದ ಪೋಸ್ಟರ್‌ ಒಂದರಲ್ಲಿ ಕೊಲೆಯನ್ನು “ಸೇಡು ತೀರಿಸಿಕೊಳ್ಳುವ” ಕ್ರಿಯೆ ಎಂದು ಬಣ್ಣಿಸಲಾಗಿದೆ. ಕೆನಡಾ ಕ್ಷಮೆಯಾಚಿಸಬೇಕು ಮತ್ತು ಭಾರತ ವಿರೋಧಿ ಪ್ರತ್ಯೇಕತಾವಾದಿ ಮತ್ತು ಉಗ್ರಗಾಮಿ ಶಕ್ತಿಗಳ ಬೆಳವಣಿಗೆಯ ಅಪಾಯಗಳನ್ನು ಮನಗಂಡು ಒಪ್ಪಿಕೊಳ್ಳಬೇಕು ಎಂದು ಭಾರತದ ರಾಜಕೀಯ ಮುಖಂಡರು ಕರೆ ನೀಡಿದ್ದಾರೆ. ಈ ಘಟನೆಯು ವಿಶಾಲ ಮಾದರಿಯ ಭಾಗವಾಗಿದೆ ಎಂದಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಈ ಶಕ್ತಿಗಳು ಭಾರತ-ಕೆನಡಾದ ಸಂಬಂಧಕ್ಕೆ ಮಾತ್ರವಲ್ಲದೆ ಕೆನಡಾಕ್ಕೂ ನಿಜವಾದ ಸವಾಲನ್ನು ಒಡ್ಡುತ್ತವೆ ಎಂದು ಸೂಚಿಸಿದ್ದಾರೆ. ಸಿಖ್ಖರಿರುವ ದೊಡ್ಡ ಸಮುದಾಯದ, “ವೋಟ್ ಬ್ಯಾಂಕ್‌”ನ ದೃಷ್ಟಿಯಿಂದ ಈ ಗುಂಪುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೆನಡಾ ವಿಫಲವಾಗಿದೆ ಎಂದು ಅವರು ಸೂಚಿಸಿದರು. 1985ರಲ್ಲಿ ಏರ್ ಇಂಡಿಯಾ ವಿಮಾನದ ಮೇಲೆ ಬಾಂಬ್ ದಾಳಿಯಾದ ಹಿಂದಿನ ಘಟನೆಗಳನ್ನು ಪರಿಗಣಿಸಿ, ಹಿಂಸೆಯನ್ನು ಪ್ರತಿಭಟನೆಯ ಸ್ವೀಕಾರಾರ್ಹ ರೂಪವಾಗಿ ಮೌಲ್ಯೀಕರಿಸುವ ಸಂಸ್ಕೃತಿಯ ಬಗ್ಗೆ ಕೆನಡಾದ ನಾಯಕತ್ವ ಎಚ್ಚರ ವಹಿಸಬೇಕು ಎಂದು ಅವರು ಹೇಳಿದರು. ಭಾರತ-ಕೆನಡಾ ಸಂಬಂಧವನ್ನು ಇದೇ ರೀತಿಯ ಸಮಸ್ಯೆಗಳು ಬಾಧಿಸುತ್ತಿವೆ; 2020ರ ಕೃಷಿ ಮಸೂದೆಯನ್ನು ಪ್ರತಿಭಟಿಸುತ್ತಿದ್ದ ಪಂಜಾಬ್ ರೈತರನ್ನು ನರೇಂದ್ರ ಮೋದಿ ಸರ್ಕಾರ ನಡೆಸಿಕೊಂಡ ಬಗೆಯನ್ನು ಟೀಕಿಸಿದ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಹೇಳಿಕೆಗಳು, ಅಲ್ಲಿನ ದೇವಾಲಯಗಳು ಮತ್ತು ಸಮುದಾಯ ಕೇಂದ್ರಗಳ ಮೇಲೆ ನಡೆದ ವಿಧ್ವಂಸಕ ಕೃತ್ಯಗಳು ಮತ್ತು ಭಾರತ ವಿರೋಧಿ ಮತ್ತು ಮೋದಿ ವಿರೋಧಿ ಗೀಚುಬರಹದ ಘಟನೆಗಳನ್ನು ಭಾರತ ಪ್ರತಿಭಟಿಸುತ್ತಿದೆ. ಇದರ ಪರಿಣಾಮವಾಗಿ, ಭಾರತವು ಉನ್ನತ ಮಟ್ಟದ ಮಾತುಕತೆಗಳನ್ನು ರದ್ದುಗೊಳಿಸಿತ್ತು ಮತ್ತು ಅವುಗಳನ್ನು ಪುನಃಸ್ಥಾಪಿಸುವುದಕ್ಕೂ ಮೊದಲು ಹಲವಾರು ತಿಂಗಳುಗಳವರೆಗೆ ನವದೆಹಲಿ ಮತ್ತು ಒಟ್ಟಾವಾ ನಡುವಿನ ಸಂವಹನವನ್ನು ಬಹುತೇಕ ಸ್ಥಗಿತಗೊಳಿಸಿತ್ತು.

ಇತ್ತೀಚಿನ ಪ್ರಚೋದನೆಯು ಅಂತಹ ಮತ್ತೊಂದು ಸುತ್ತಿನ ಬಿಕ್ಕಟ್ಟಿಗೆ ದೂಡಬಹುದು, ಮತ್ತು ದ್ವಿಪಕ್ಷೀಯ ಸಂಬಂಧಗಳಲ್ಲಿ ಮತ್ತೊಂದು ಕುಸಿತವನ್ನು ತಪ್ಪಿಸಲು ಬಯಸಿದರೆ ಎರಡೂ ಸರ್ಕಾರಗಳು ರಾಜತಾಂತ್ರಿಕವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ. ಕೆನಡಾದ ಸರ್ಕಾರವು ತನ್ನ ದೇಶದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ತನ್ನ ಹಕ್ಕುಗಳನ್ನು ಹೊಂದಿದ್ದರೂ, ಪ್ರಧಾನ ಮಂತ್ರಿಯ ಹತ್ಯೆಯನ್ನು ವೈಭವೀಕರಿಸುವ ಸ್ತಬ್ಧಚಿತ್ರಗಳ ಮೆರವಣಿಗೆ, ಪ್ರಚೋದಕ ದ್ವೇಷದ ಭಾಷಣವನ್ನು ರೂಪಿಸುತ್ತವೆ ಮತ್ತು ಮೂಲಭೂತವಾದವನ್ನು ಉತ್ತೇಜಿಸಬಹುದು ಎಂಬ ಭಾರತದ ಕಾಳಜಿಯನ್ನು ಅದು ಅರ್ಥಮಾಡಿಕೊಳ್ಳಬೇಕು. ಏತನ್ಮಧ್ಯೆ, ಕಾನೂನುಬದ್ಧವಾದ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಥವಾ ಪ್ರತಿ ವಿಧ್ವಂಸಕ ಕೃತ್ಯದ ಬಗ್ಗೆ ರಾಜಕೀಯ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸುವ ಬದಲು, ಅಂತಹ ಗುಂಪುಗಳು ನಡೆಸುತ್ತಿರುವ ಪಿತೂರಿ, ಉಗ್ರಗಾಮಿ ಚಟುವಟಿಕೆ ಮತ್ತು ಭಯೋತ್ಪಾದಕ ಕೃತ್ಯಗಳ ಪುರಾವೆಗಳನ್ನು ಹಂಚಿಕೊಂಡು ಸಹಕರಿಸಲು ನವದೆಹಲಿಗೆ ಸಾಧ್ಯವಾದರೆ ಅದು ಹೆಚ್ಚು ಉಪಯೋಗವಾದೀತು. ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್‌ನ ಕೆಲವು ಭಾಗಗಳಲ್ಲಿ ಖಲಿಸ್ತಾನಿ ಪ್ರತಿಭಟನೆಗಳು ಕಂಡುಬಂದಿರುವುದರಿಂದ, ಮೋದಿ ಸರ್ಕಾರವು ವಿಶಾಲ ರಾಜತಾಂತ್ರಿಕ ಕಾರ್ಯತಂತ್ರವನ್ನು ರೂಪಿಸಿ, ಈಗ ಸಮಸ್ಯೆಯನ್ನು ಎದುರಿಸಲು ಪರಿಣಾಮಕಾರಿ ಮಾರ್ಗಗಳನ್ನು ಕಂಡುಕೊಳ್ಳಬೇಕು; ಜಿ-20 ಶೃಂಗಸಭೆಗಾಗಿ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿರುವ ಈ ಎಲ್ಲಾ ದೇಶಗಳ ನಾಯಕರೊಂದಿಗೆ ಕೂಡ ಈ ಸಮಸ್ಯೆಯನ್ನು ಚರ್ಚಿಸಬಹುದು.

Top News Today

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.